ಮುದುವೀಡ ಕೃಷ್ಣರಾವ್ : -
1874-1947. ಕರ್ಣಾಟಕದ ಪ್ರಥಮ ಕ್ರಾಂತಿಕಾರಿಗಳಲ್ಲಿ ಹಿರಿಯರು. ಕರ್ಣಾಟಕದ ಸಿಂಹ ಎಂಬ ಕೀರ್ತಿಗೆ ಪಾತ್ರರಾದವರು. ಕನ್ನಡ ಚಳವಳಿಯ ಪುರಸ್ಕರ್ತರು. ದೇಶಾದ್ಯಂತ ಪ್ರಯಾಣಮಾಡಿ ತಮ್ಮ ಸಿಂಹ ಕಂಠದಿಂದ ಭಾಷಣಗಳನ್ನು ಮಾಡಿ ಜನತೆಯಲ್ಲಿ ಕರ್ಣಾಟಕ ಮತ್ತು ಕನ್ನಡಗಳ ಬಗ್ಗೆ ಸ್ಫೂರ್ತಿ, ಮಮತೆ ಹುಟ್ಟಿಸಿದವರು. ಕನ್ನಡ ರಂಗಭೂಮಿಯ ಸೇವಕರು. ಅಲ್ಲದೆ ಕರ್ನಾಟಕ ವೃತ್ತ ಮತ್ತು ಧನಂಜಯ ಪತ್ರಿಕೆಗಳನ್ನು ಕಾಲು ಶತಮಾನದವರೆಗೆ ನಡೆಸಿ ಕನ್ನಡ ಪತ್ರಿಕಾ ಪ್ರಪಂಚಕ್ಕೆ ಅಮೋಘವಾದ ಸೇವೆ ಸಲ್ಲಿಸಿದವರು.

	ಸ್ವತಂತ್ರ ಭಾರತ, ಏಕೀಕೃತ ಕರ್ನಾಟಕಗಳು ಕೃಷ್ಣರಾಯರ ದಿವ್ಯ ಕನಸಾಗಿದ್ದವು. ಭಾರತ ಸ್ವಾತಂತ್ರ್ಯ ಆಂದೋಲನದಲ್ಲಿ ಇವರು ಮೊದಲಿಗೆ ಧುಮುಕಿದುದು ಒಂದು ಗುಪ್ತ ಕ್ರಾಂತಿಕಾರಿ ಸಂಸ್ಥೆಯ ಸದಸ್ಯರಾಗಿ. ತಮ್ಮ ನಿಕಟ ಸ್ನೇಹಿತರೊಂದಿಗೆ ಇವರು ಸಾವಿರಾರು ಖಡ್ಗಧಾರಿ ಬೇಡರಪಡೆಯನ್ನು ಸಂಘಟಿಸಿದ್ದರು. ದೇಶಕಾರ್ಯಕ್ಕೆ ಹಣ ಸಾಲದಾದಾಗ ಇವರು ತಮ್ಮ ಆದಾಯವನ್ನೇ ಅದಕ್ಕಾಗಿ ಮುಡುಪಾಗಿಟ್ಟರು.

	ಕನ್ನಡದ ಆಂದೋಲನವನ್ನು ಕೃಷ್ಣರಾಯರು ತಮ್ಮ ಎಳೆತನದಲ್ಲೇ ಪ್ರಾರಂಭಿಸಿದರು. 1896ರಲ್ಲಿ ಇವರು ಗಜಾನನ ಉತ್ಸವದಲ್ಲಿಯ ವಾಕ್ ಸ್ಪರ್ಧೆಯಲ್ಲಿ ಕನ್ನಡದಲ್ಲಿ ಮಾತನಾಡಿ ಬಹುಮಾನ ಪಡೆದು ಕನ್ನಡದ ಕೀರ್ತಿಪತಾಕೆಯನ್ನು ಹಾರಿಸಿದರು. ಆಗ ಕನ್ನಡದ ಹಿರಿಯರು ಬೆನ್ನು ಚಪ್ಪರಿಸಿ ಇವರಿಗೆ ಕನ್ನಡತನದ ದೀಕ್ಷೆ ನೀಡಿದರು. ಅನಂತರ ಕನ್ನಡ ಸಾಹಿತ್ಯಸಮ್ಮೇಳನ, ರಾಜಕೀಯ ಪರಿಷತ್ತು ಈ ಮೊದಲಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡದ ಹಿರಿಮೆಯನ್ನು ಮೆರೆಯಲು ಕೃಷ್ಣರಾಯರು ಸಹಾಯಕರಾದರು. ಸಭೆ ಸಮಾರಂಭಗಳಲ್ಲಿ ಇವರು ಸಿಂಹಗರ್ಜನೆಯಿಂದ ಜನಜಾಗ್ರತಿಯನ್ನು ಮಾಡುತ್ತಿದ್ದರು. ಇವರಿಗೆ ಧ್ವನಿವರ್ಧಕದ ಅವಶ್ಯಕತೆಯೇ ಬೀಳುತ್ತಿದ್ದಿಲ್ಲ. ಇದ್ದರೂ ಅದನ್ನಿವರು ಬದಿಗಿರಿಸಿ ಮಾತನಾಡುತ್ತಿದ್ದರು. ಕೃಷ್ಣರಾಯರ ಕಂಠಶ್ರೀ ಅಷ್ಟು ಗಡದ್ದಾದುದು.

	ಕೃಷ್ಣರಾಯರು ಉತ್ತಮ ವಾಗ್ಮಿಗಳಾಗಿದ್ದಂತೆ ತತ್‍ಕ್ಷಣದ ಅನುವಾದದಲ್ಲಿ ಎತ್ತಿದ ಕೈ ಎನಿಸಿದ್ದರು. ರಾಜಾಜಿ ಮತ್ತು ಪಟ್ಟಾಭಿ ಸೀತಾರಾಮಯ್ಯ ಇಬ್ಬರೂ ಇವರ ಈ ಕಲೆಯನ್ನು ಮೆಚ್ಚಿಕೊಂಡು ಕರ್ಣಾಟಕದ ತಮ್ಮ ಕಾರ್ಯಕ್ರಮಗಳಲ್ಲಿ ತಮ್ಮ ಭಾಷಣಗಳ ಅನುವಾದಕ್ಕಾಗಿ ಇವರನ್ನು ಕರೆದೊಯ್ಯುತ್ತಿದ್ದರು. ಹುಬ್ಬಳ್ಳಿಯ ಒಂದು ಸಭೆಯಲ್ಲಿ ಮೆನ್, ಮನಿ ಅಂಡ್ ಮ್ಯೂನಿಷನ್ ಎಂಬ ಪದಪುಂಜವನ್ನು ಕೂಡಲೇ ಮನುಷ್ಯ, ಮಾಲಕ್ಷ್ಮಿ, ಮಮ್ಮು-ಮದ್ದು ಎಂದು ಕನ್ನಡಕ್ಕೆ ಪರಿವರ್ತಿಸಿ ಕೃಷ್ಣರಾಯರು ರಾಜಾಜಿಯವರಿಂದ ಸೈ ಎನಿಸಿಕೊಂಡರು. ನೆಹರು ಅವರು ಕರ್ನಾಟಕದ ಸಂಚಾರದಲ್ಲಿ ತಮ್ಮ ಭಾಷಣಗಳ ಅನುವಾದಕ್ಕೆ ಇವರನ್ನೇ ಕರೆದೊಯ್ಯುತ್ತಿದ್ದರು.	ಕೃಷ್ಣರಾಯರು ನುರಿತ ಪತ್ರಿಕೋದ್ಯಮಿಗಳೂ ಹೌದು. ಒಂದು ಕಾಲು ಶತಮಾನಗಳ ಕಾಲ ಕರ್ನಾಟಕ ವೃತ್ತ ಮತ್ತು ಧನಂಜಯ ಪತ್ರಿಕೆಗಳನ್ನು, ಎಲ್ಲ ಏರುಪೇರುಗಳನ್ನೂ ಸಹಿಸಿ, ಇವರು ನಡೆಸಿಕೊಂಡು ಬಂದರು. ಸ್ವಾತಂತ್ರ್ಯ ಆಂದೋಲನದ ವರದಿಗಳನ್ನು ಯಥಾವತ್ತಾಗಿ ಕೊಡುವುದರೊಂದಿಗೆ ಅಗ್ರಲೇಖನಗಳನ್ನು ಒಳ್ಳೆಗಡುಸಾದ ಗಂಡುಶೈಲಿಯ ಕನ್ನಡದಲ್ಲಿ ಕೃಷ್ಣರಾಯರು ಬರೆಯುತ್ತಿದ್ದರು. ಡೈಯರನ ಕ್ರೌರ್ಯವನ್ನು ಮೆರೆಯಲು ಧಾರವಾಡದ ಆಗಿನ ಕಲೆಕ್ಟರ್ ಮುಂದಾದಾಗ ಡೈಯರನೆಂದರೂ ಬಣ್ಣ ಬಳಿಯುವವನೇ ಪೇಂಟರನೆಂದರೂ ಬಣ್ಣ ಬಳೆಯುವವನೇ ಎಂದು ಅಗ್ರಲೇಖ ಬರೆದು ಅವನನ್ನಿವರು ಚೆನ್ನಾಗಿ ಛೀಮಾರಿ ಹಾಕಿದ್ದರು.

	ಇದಕ್ಕೂ ಮಿಗಿಲಾಗಿ ಇವರು ಒಳ್ಳೆ ಕಲಾವಿದರು. ರಂಗಭೂಮಿಯ ಅಭಿಮಾನಿಗಳು. 1907ರಲ್ಲಿ ಭಾರತ ಕಲೋತ್ತೇಜಕ ನಾಟಕಮಂಡಳಿ ಎಂಬ ನಾಟ್ಯವಿಲಾಸಿ ತರುಣರ ಸಂಸ್ಥೆಯನ್ನಿವರು ಸಂಘಟಿಸಿದರು. ಇವರು ಸ್ವತ: ಗಾಯಕರು, ಗಮಕಿಗಳು. ಹೀಗಾಗಿ ಅನೇಕ ಒಳ್ಳೆಯ ನಾಟಕಗಳನ್ನು ಅಭಿನಯಿಸುವಂತೆ ಸ್ವಯಂ ತರಬೇತಿ ನೀಡಿದರು. ಪ್ರೇಮಭಂಗ ಎಂಬ ನಾಟಕವನ್ನು ಬರೆದಿದ್ದರಲ್ಲದೆ ಚಿರಂಜೀವಿ ಚಿತ್ರದಲ್ಲಿ ಯಮ ಹಾಗೂ ಚಿತ್ರಗುಪ್ತನ ಪಾತ್ರಗಳನ್ನು ನಿರ್ವಹಿಸಿದ್ದರು. ಇವರಿಂದ ಅನೇಕ ಶ್ರೇಷ್ಠ ನಾಟಕ ಕಂಪನಿಗಳೂ ಸ್ಫೂರ್ತಿಗೊಂಡು ತಲೆಯೆತ್ತಿದುವು.

	ಕೃಷ್ಣರಾಯರು ಒಳ್ಳೆಯ ಕಾದಂಬರಿಕಾರರು. ಇವರು ಬರೆದ ಚಿತ್ತೂರು ಮುತ್ತಿಗೆ ಎಂಬ ಐತಿಹಾಸಿಕ ಕಾದಂಬರಿ 1904ರ ವಾಗ್ಭೂಷಣದಲ್ಲಿ ಧಾರವಾಹಿಯಾಗಿ ಪ್ರಕಟವಾಯಿತು. ಕೃಷ್ಣರಾಯರು 1939ರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

	ಕೃಷ್ಣರಾಯರು ಅಂಥ ಎತ್ತರದ ಆಳಲ್ಲದಿದ್ದರೂ ಗಿಡ್ಡರಂತೂ ಅಲ್ಲ. ಇವರದು ಕಟ್ಟುಮಸ್ತಾದ ವ್ಯಕ್ತಿತ್ವ, ಯಾರನ್ನೂ ತಮ್ಮತ್ತ ಸೆಳೆದುಕೊಳ್ಳುವಂಥದು. ಕನ್ನಡದ, ಕರ್ಣಾಟಕದ ಚರಿತ್ರೆಯಲ್ಲಿ ಕೃಷ್ಣರಾಯರದು ಮರೆಯಲಾಗದ ಹೆಸರು.  	
	(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ